ನೂತನ ಪರೀಕ್ಷಣಗಳು -
ಸಾಂಪ್ರದಾಯಿಕ ಪರೀಕ್ಷೆಗಳಲ್ಲೂ ಪ್ರಶ್ನೆಪತ್ರಿಕೆ ಮತ್ತು ಮೌಲ್ಯಮಾಪನಗಳಲ್ಲೂ ಕಂಡುಬರುವ ಲೋಪದೋಷಗಳನ್ನು ನಿವಾರಿಸಲು ಈ ಶತಮಾನದ ಆದಿಯಿಂದ ಪ್ರಚಾರಕ್ಕೆ ಬಂದಿರುವ ವಸ್ತುವಿನ ಪ್ರಶ್ನೆಗಳು.

	ಸಾಂಪ್ರದಾಯಿಕ ಪರೀಕ್ಷೆಗಳು ವಿದ್ಯಾರ್ಥಿ ಶಿಕ್ಷಣದಿಂದ ಪಡೆದಿರುವ ಫಲವನ್ನು ನಿರ್ದಿಷ್ಟವಾಗಿ ಅಳೆಯಲಾರವು. ಅವು ಹಲವಾರು ಉದ್ದೇಶಗಳಿಂದ ಕೂಡಿದ್ದರೂ ಯಾವ ಉದ್ದೇಶವೂ ಸಮರ್ಪಕವಾಗಿ ಈಡೇರಲಾರದು; ಮಕ್ಕಳ ಅಭಿರುಚಿ ಆಸಕ್ತಿಗಳನ್ನಾಗಲಿ ಶಕ್ತಿಸಾಮಥ್ರ್ಯಗಳನ್ನಾಗಲಿ ಅವು ಗುರುತಿಸಲಾರವು. ಜ್ಞಾಪಕಶಕ್ತಿಯನ್ನೇ ಅವಲಂಬಿಸಿರುವ ಕೇವಲ ಪುಸ್ತಕ ಜ್ಞಾನವನ್ನು ಮಾತ್ರ ಅವು ಪರೀಕ್ಷಿಸುತ್ತವೆಯೇ ಹೊರತು ಶಿಕ್ಷಣದ ಇತರ ಅಮೂಲ್ಯ ಪ್ರತಿಫಲಗಳನ್ನು ಅವು ಅಳೆಯಲಾರವು. ಅಲ್ಲದೆ ಮೌಲ್ಯಮಾಪನದಲ್ಲೂ ವಿವಿಧ ದೋಷಗಳು ನುಸುಳಿಕೊಳ್ಳುತ್ತವೆ.

	ಈ ಎಲ್ಲ ಲೋಪದೋಷಗಳ ಹಿನ್ನೆಲೆಯಲ್ಲಿ ಪರೀಕ್ಷಾಪದ್ಧತಿಯನ್ನು ಉತ್ತಮಪಡಿಸಲು ಅನೇಕ ಪ್ರಯತ್ನಗಳೂ ನಡೆದಿವೆ. ಅವುಗಳ ಪೈಕಿ ನೂತನ ರೀತಿಯ ಪ್ರಶ್ನೆಗಳ ರಚನೆ ಆ ಲೋಪದೋಷಗಳನ್ನು ಬಹುಮಟ್ಟಿಗೆ ನಿವಾರಿಸುತ್ತದೆ.

	ಸಾಂಪ್ರದಾಯಿಕ ಪರೀಕ್ಷೆಯಲ್ಲಿ ಬಳಸುವ ಪ್ರಶ್ನೆಪತ್ರಿಕೆಯಲ್ಲಿ ಕೆಲವೇ ಪ್ರಶ್ನೆಗಳಿರಬೇಕಾಗುತ್ತದಾಗಿ ಎಲ್ಲ ಪಾಠಗಳ ಮೇಲೂ ಪ್ರಶ್ನೆ ಕೇಳಲು ಸಾಧ್ಯವಾಗುವುದಿಲ್ಲ. ಹಾಗೂ ಅವಕ್ಕೆ ಉತ್ತರಿಸುವಾಗ ಕೇವಲ ಕಂಠಪಾಠ ಮಾಡಿದ ವಿಷಯಗಳನ್ನು ಉದ್ದ ಪ್ರಬಂಧದ ಮಾದರಿಯಲ್ಲಿ ಬರೆಯಬೇಕಾಗುತ್ತದೆ. ನೂತನ ಪ್ರಶ್ನೆಗಳು ಸಣ್ಣ ಸಣ್ಣ ಉತ್ತರ ಬಯಸುವುದಲ್ಲದೆ ಅಧಿಕ ಸಂಖ್ಯೆಯಲ್ಲಿರುವುದರಿಂದ ಮಾಡಿರುವ ಎಲ್ಲ ಪಾಠ ವಿಷಯಗಳನ್ನೂ ಒಳಗೊಳ್ಳುತ್ತವೆ. ಜೊತೆಗೆ ಅವುಗಳಿಗೆ ನಿರ್ದಿಷ್ಟ ಉತ್ತರಗಳಿರುವುದರಿಂದ ಮೌಲ್ಯಮಾಪನದಲ್ಲಿ ಯಾವ ವ್ಯತ್ಯಾಸವೂ ಬಾರದು. ಎಂದರೆ ಉತ್ತರಕ್ಕೆ ವಸ್ತುನಿಷ್ಠವಾಗಿ ಬೆಲೆ ಕಟ್ಟುವುದು ಸಾಧ್ಯವಾಗುತ್ತದೆ.

	ಸಾಂಪ್ರದಾಯಿಕ ಪ್ರಶ್ನೆಗಳ ಉತ್ತರಗಳು ಕೇವಲ ಸ್ಮರಣೆಯನ್ನು ಅವಲಂಬಿಸಿರುತ್ತವೆ. ನೂತನ ಪ್ರಶ್ನೆಗಳನ್ನು ಉತ್ತರಿಸುವಾಗ, ಸ್ಮರಣೆ, ಅಭಿಜ್ಞಾನ, ತರ್ಕ ಮುಂತಾದ ಮನಸ್ಸಿನ ಇತರ ವ್ಯಾಪಾರಗಳೂ ಕಾರ್ಯಮುಖವಾಗುತ್ತದೆ. ಇಂಥ ಹಲವಾರು ರೀತಿಯ ಪರೀಕ್ಷಣಗಳು ಈಗ ಪ್ರಚಾರದಲ್ಲಿವೆ. ಇವುಗಳಲ್ಲಿ ಕೆಲವನ್ನು ಮುಂದೆ ಸೂಚಿಸಿದೆ.
ಸತ್ಯಾಸತ್ಯ ಪರೀಕ್ಷಣ: ಕೊಟ್ಟಿರುವ ಅನೇಕ ನಿರೂಪಣೆಗಳಲ್ಲಿ ಕೆಲವು ನಿಜವಾಗಿದ್ದರೆ ಇನ್ನು ಕೆಲವು ಸುಳ್ಳಾಗಿರುತ್ತವೆ. ವಿದ್ಯಾರ್ಥಿಗಳು ಯಾವುದು ಸುಳ್ಳು ಯಾವುದು ನಿಜ ಎಂಬುದನ್ನು ಸಂಕೇತಗಳ ಮೂಲಕ ಸೂಚಿಸಬೇಕು. ಕೊಟ್ಟಿರುವ ಎರಡಂಶಗಳಲ್ಲಿ ಸರಿಯಾದದ್ದನ್ನು ಗುರುತಿಸಬೇಕಾದ ಇದು ಒಂದು ಅಭಿಜ್ಞಾನ ಪರೀಕ್ಷಣ.
ಪ್ರವರಣೀಯ ಪರೀಕ್ಷಣ (ಬಹು ಅಂಶಗಳಿಂದ ಆಯುವ ಪರೀಕ್ಷಣ): ಒಂದು ಅಪೂರ್ಣ ನಿರೂಪಣೆಯನ್ನು ಕೊಟ್ಟು ಅದನ್ನು ಪೂರೈಸಲು ಹಲವಾರು ಅಂಶಗಳನ್ನು ಕೊಟ್ಟಿರುತ್ತದೆ. ಪರೀಕ್ಷಾರ್ಥಿಗಳೂ ಅವುಗಳಲ್ಲಿ ಅತ್ಯಂತ ಸಮರ್ಪಕವಾದ್ದನ್ನು ಗುರುತಿಸಬೇಕು. ಇದೂ ಒಂದು ಅಭಿಜ್ಞಾನ ಪರೀಕ್ಷಣ.

ವರ್ಗೀಕರಣ ಪರೀಕ್ಷಣ: ಒಂದು ವರ್ಗಕ್ಕೆ ಸೇರಿದ ಹಲವಂಶಗಳನ್ನೂ ಆ ವರ್ಗಕ್ಕೆ ಸೇರದ ಒಂದಂಶವನ್ನೂ ಕೊಟ್ಟಿರುತ್ತದೆ. ಆ ವರ್ಗಕ್ಕೆ ಹೊಂದದ ಅಂಶವನ್ನು ಗುರುತಿಸಬೇಕು.

ಸಂಕೇತ ಪರೀಕ್ಷಣ: ಹಲವಾರು ಸಂಕೇತಗಳುಳ್ಳ ಒಂದು ನಿರೂಪಣೆಯನ್ನೂ ಸಂಕೇತವೊಂದೊಂದಕ್ಕೂ ಕೊಟ್ಟಿರುವ ಅರ್ಥವನ್ನು ಅಳವಡಿಸಿಕೊಂಡು ಅರ್ಥ ಮಾಡಬೇಕಾಗುತ್ತದೆ.

ಅರ್ಥಗ್ರಹಣ ಪರೀಕ್ಷಣ: ಕೊಟ್ಟಿರುವ ಹಲವಂಶಗಳನ್ನು ಓದಿಕೊಂಡು ಕೇಳಿರುವಂತೆ ಒಂದು ತೀರ್ಮಾನಕ್ಕೆ ಬರಬೇಕು, ಇಲ್ಲಿ ವಿದ್ಯಾರ್ಥಿಯ ಅರ್ಥಗ್ರಹಣ ಶಕ್ತಿಯನ್ನು ಪರೀಕ್ಷಿಸಲಾಗುವುದು.

ಅಪವರ್ಜನ ಪರೀಕ್ಷಣ: ಕೊಟ್ಟಿರುವ ಕೆಲವು ಪದ, ಸಂಖ್ಯೆ ಅಥವಾ ಆಕರಗಳಲ್ಲಿ ಕೇಳಿರುವುದನ್ನು ಮಾತ್ರ ಆದಷ್ಟು ಬೇಗ ಆದಷ್ಟು ತಪ್ಪಿಲ್ಲದಂತೆ ತೊಡೆದು ಹಾಕುವಂತೆ ರಚಿಸಿರುವ ಈ ಪರೀಕ್ಷೆಯಲ್ಲಿ ವಿದ್ಯಾರ್ಥಿ ಉತ್ತರಿಸುವ ವೇಗವನ್ನು ಪರೀಕ್ಷಿಸಲಾಗುವುದು.

ಪೂರಕ ಪರೀಕ್ಷಣ: ಒಂದು ನಿರೂಪಣೆಯಲ್ಲಿ ಒಂದೊ ಎರಡೋ ಅಂಶಗಳು ಬಿಟ್ಟಿರುತ್ತವೆ. ಪರೀಕ್ಷಾರ್ಥಿ ಅದನ್ನು ಭರ್ತಿ ಮಾಡಬೇಕು. ಇಲ್ಲಿ ಜ್ಞಾಪಕಶಕ್ತಿಯನ್ನು ಪರೀಕ್ಷಿಸಲಾಗುತ್ತದೆ. ಇದೊಂದು ಸ್ಮರಣಶಕ್ತಿ ಪರೀಕ್ಷಣ.

ವಿನ್ಯಾಸ ಪರೀಕ್ಷಣ (ಜೋಡಣೆಯ ಪರೀಕ್ಷಣ): ಕೊಟ್ಟಿರುವ ಹಲವು ಅಂಶಗಳ ಎರಡು ಪಟ್ಟಿಗಳಲ್ಲಿ ಒಂದು ಪಟ್ಟಿಯಲ್ಲಿರುವ ಅಂಶಕ್ಕೆ ಸಂಬಂಧಪಟ್ಟ ಅಂಶ ಇನ್ನೊಂದು ಪಟ್ಟಿಯಲ್ಲಿರುತ್ತದೆ; ಆದರೆ ಅದೇ ಸಮಾಂತರದಲ್ಲಿರದೆ ಬೇರೆ ಬೇರೆ ಸ್ಥಾನದಲ್ಲಿರುತ್ತದೆ. ಪರೀಕ್ಷಾರ್ಥಿ ಆಯಾ ಅಂಶಕ್ಕೆ ಸಂಬಂಧಿಸಿದ ಅಂಶಗಳನ್ನು ಗೆರೆ ಹಾಕಿ ಗುರುತಿಸಬೇಕು. ಇದೊಂದು ಅಭಿಜ್ಞಾನ ಪರೀಕ್ಷಣ.
ತರ್ಕ ಪರೀಕ್ಷಣ (ಕಾರ್ಯಕಾರಣ ಸಂಬಂಧ ಪರೀಕ್ಷಣ): ಕೊಟ್ಟಿರುವ ಕೆಲವು ಅಂಶಗಳ ಆಧಾರದ ಮೇಲೆ ಅವುಗಳಿಂದ ಅನುಮಿತವಾಗತಕ್ಕ ಅಂಶವನ್ನು ಗುರುತಿಸಬೇಕು.

10. ಪರ್ಯಾಯ ವಿಪರ್ಯಾಯ ಪರೀಕ್ಷಣ: ಕೊಟ್ಟಿರುವ ಎರಡು ಶ್ರೇಣಿಗಳಲ್ಲಿನ ಪದಗಳು ಸಮಾನಾರ್ಥಕವೆ, ವಿರುದ್ಧಾರ್ಥಕವೆ ಅಥವಾ ಎರಡೂ ಅಲ್ಲವೆ ಎಂಬುದನ್ನು ಸೂಚಿಸಬೇಕು. ಇದೊಂದು ಅಭಿಜ್ಞಾನ ಪರೀಕ್ಷಣ.

ನೂತನ ಪರೀಕ್ಷಣಗಳ ಬಳಕೆ: ನೂತನ ಪರೀಕ್ಷಾ ಪದ್ಧತಿಯಲ್ಲಿ ಮೇಲಿನ ವಿವಿಧ ರೀತಿಯ ಪರೀಕ್ಷಣಗಳು ಪ್ರಚಾರದಲ್ಲಿವೆ. ವಿದ್ಯಾರ್ಥಿಗಳ ಶಿಕ್ಷಣಾಭಿವೃದ್ಧಿಯನ್ನು ಅಳೆಯಲು ಬಳಸುವ ಈ ಪರೀಕ್ಷಣಗಳನ್ನು ನಿಷ್ಪತ್ತಿ ಪರೀಕ್ಷಣ ಎನ್ನುವರು. ಅಂತೆಯೇ ಇವನ್ನು ಇತರ ಶೈಕ್ಷಣಿಕ ಕಾರ್ಯಕ್ರಮಗಳಲ್ಲೂ ಬಳಸುವರು. ಅವುಗಳಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಯಾವ ಅಂಶಗಳಲ್ಲಿ ದುರ್ಬಲರಾಗಿರುವರೆಂಬುದನ್ನು ಗುರುತಿಸಲು ನೈದಾನಿಕ ಪರೀಕ್ಷಣಗಳೂ ಅವರು ಮುಂದಿನ ವಿದ್ಯಾರ್ಥಿಜೀವನದಲ್ಲಿ ಸಾಧಿಸಬಹುದಾದ ಯಶಸ್ಸನ್ನು ಮುನ್ಸೂಚಿಸಲು ಬಳಸುವ ಪ್ರಾಜ್ಞಾನ ಪರೀಕ್ಷಣಗಳು ಮುಖ್ಯವಾದವು. ಶೈಕ್ಷಣಿಕ ಸಂಶೋಧನೆಗಳಲ್ಲಿ ಪ್ರಯೋಗದ ಪರಿಣಾಮವನ್ನು ನಿರ್ಧರಿಸಲೂ ನೂತನ ಪರೀಕ್ಷಣಗಳನ್ನು ಬಳಸುವರು. ಸಂಶೋಧಕರು ಬಳಸುವ ಪ್ರಶ್ನಾವಳಿಗಳಲ್ಲೂ ಇಂಥ ಪರೀಕ್ಷಣಗಳನ್ನು ಬಳಸುವರು.

	ನೂತನ ಪರೀಕ್ಷಣಗಳ ಕುಂದುಕೊರತೆಗಳು: ನೂತನ ಪರೀಕ್ಷಣಗಳು ಸಾಂಪ್ರದಾಯಿಕ ಪರೀಕ್ಷಣಗಳ ಹಲವು ಕುಂದುಕೊರತೆಗಳನ್ನು ನಿವಾರಿಸಬಲ್ಲವಾದರೂ ಅವುಗಳಲ್ಲೂ ಹಲವು ಕುಂದುಕೊರತೆಗಳಿವೆ. ಅವು ವಿದ್ಯಾರ್ಥಿ ಎಷ್ಟರಮಟ್ಟಿಗೆ ವಿಷಯವನ್ನು ವ್ಯವಸ್ಥಿತಗೊಳಿಸಬಲ್ಲವೆಂಬುದನ್ನು ಅಳೆಯಲಾರವು. ವಿಷಯ ವಿವರಣೆಯಲ್ಲಿ ಭಾಷಾಬಳಕೆಯ ಶಕ್ತಿಯನ್ನೂ ವಿಷಯದ ಸಮಗ್ರ ಪರಿಚಯವನ್ನೂ ಅಳೆಯಲಾರವು. ಆದ್ದರಿಂದ ಈಚೆಗೆ ಪ್ರಬಂಧ ರೀತಿಯ ಪ್ರಶ್ನೆಗಳ ಜೊತೆಗೆ ಉಚಿತ ಪ್ರಮಾಣದಲ್ಲಿ ನೂತನ ಪರೀಕ್ಷಣಗಳನ್ನೂ ಬಳಸುವ ಸಂಪ್ರದಾಯ ಪ್ರಚಾರಕ್ಕೆ ಬರುತ್ತಿದೆ. ಕೆಳವರ್ಗದ ಶಿಕ್ಷಣ ಹಂತದಲ್ಲಿ ಪುಟ್ಟ ಉತ್ತರಗಳನ್ನು ಕೋರುವ ಪುಟ್ಟ ಪ್ರಶ್ನೆಗಳನ್ನು ಹೆಚ್ಚಾಗಿ ಬಳಸಿದರೆ ದೀರ್ಘ ಉತ್ತರಗಳನ್ನು ಬಯಸುವ ಮೇಲ್ವರ್ಗದ ಪರೀಕ್ಷೆಗಳಲ್ಲಿ ಪ್ರಬಂಧ ರೀತಿಯ ಉತ್ತರಗಳನ್ನು ಕೋರುವ ಪ್ರಶ್ನೆಗಳನ್ನು ಹೆಚ್ಚಾಗಿ ಬಳಸಬೇಕಾಗುತ್ತದೆ.							(ಎನ್.ಎಸ್.ವಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ